ಬಾಲ್‍ಬೆಕ್ 	
ಲೆಬನಾನಿನ ಬೇಕ್ಕಾ ಪ್ರಾಂತ್ಯದಲ್ಲಿರುವ ಒಂದು ಪಟ್ಟಣ. ಬೈರೂತಿಗೆ ಈಶಾನ್ಯದಲ್ಲಿ 80 ಕಿಮೀ ದೂರದಲ್ಲಿದೆ. ಜನಸಂಖ್ಯೆ 16,435 (1975). ಆಂಟಿಲೆಬನಾನ್ ಪರ್ವತಶ್ರೇಣಿಯ ಪಶ್ಚಿಮ ಇಳಿಜಾರಿನಲ್ಲಿರುವ ಈ ಪಟ್ಟಣಕ್ಕೆ ಡಮಾಸ್ಕಸ್, ಬೈರೂತ್ ಮುಂತಾದ ನಗರಗಳೊಡನೆ ರೈಲು ರಸ್ತೆಗಳ ಸಂಪರ್ಕವಿದೆ.

ಅನೇಕ ಪ್ರಾಚೀನ ಅವಶೇಷಗಳು ಮತ್ತು ಸ್ಮಾರಕಗಳು ಇಲ್ಲಿವೆ. ಇವು ಇಡೀ ಮಧ್ಯಪ್ರಾಚ್ಯದ ಅತ್ಯಂತ ಪ್ರಾಚೀನಕಾಲದವು. ಇವುಗಳಿಂದಾಗಿ ಪಟ್ಟಣ ಹೆಸರಾದಂತಿದೆ. ಗ್ರೀಕ್ ಮತ್ತು ರೋಮನರ ಕಾಲಗಳಲ್ಲಿ ಈ ನಗರವನ್ನು ಹೀಲಿಯೋಪಾಲಿಸ್ ಅಂದರೆ ಸೂರ್ಯಪುರವೆಂದು ಕರೆಯುತ್ತಿದ್ದರು. ಗ್ರೀಕೋ-ರೋಮನರ ಕಾಲದಲ್ಲಿ ಇದು ಬಹಳ ಮುಖ್ಯ ಸಾಂಸ್ಕøತಿಕ ಕೇಂದ್ರವಾಗಿದ್ದು ಹೋಮ್ಸ್, ಟ್ರಿಪೋಲಿ, ಜೂನೆ, ಬೈರೂತ್ ಡಮಾಸ್ಕಸ್, ಸೀಡಾನ್‍ಗಳೊಡನೆ ಸಂಪರ್ಕ ಪಡೆದಿತ್ತು. ಈ ನಗರವನ್ನು ಬಾಲ್-ಮೆಲಕ್, ಬಾಲ್-ಬೇಕ್ಕಾ ಎಂಬ ಹೆಸರುಗಳಿಂದಲೂ ಕರೆಯುವುದುಂಟು. ಕ್ರಿ.ಪೂ. 738ರಲ್ಲಿ ಎರಡನೆಯ ಟಗ್ಲಿತ್ ಪಿಲೀಸೀರ್ ವಶಪಡಿಸಿಕೊಂಡ ಈ ಪಟ್ಟಣ ಆಗಿನ ಕಾರ್-ಹದಾದ್ ಎಂದು ಗುರುತಿಸಲಾಗಿದೆ. ಬಾಲಬೆಕ್ ಮೊದಲು ಬೇಬಲ್ ದೇವತೆಯ ಆವಾಸಸ್ಥಾನವಾಗಿತ್ತು. ಅನಂತರ ಬಂದ ಗ್ರೀಕರು ಈ ದೇವತೆಯನ್ನು ಸೂರ್ಯನೊಂದಿಗೆ ಗುರುತಿಸಿ ಈ ನಗರವನ್ನು ಸೂರ್ಯಪುರವೆಂದು ಕರೆದರು. ಆಗಸ್ಟಸ್ ಕ್ರಿ. ಪೂ. 31ರಿಂದ ಕ್ರಿ. ಶ. 14ರ ವರೆಗೆ ಈ ನಗರವನ್ನು ರೋಮನರ ವಸಾಹತುವನ್ನಾಗಿ ಮಾಡಿ ಇಲ್ಲಿ ಒಂದು ಸಣ್ಣ ಕೋಟೆಯನ್ನು ನಿರ್ಮಿಸಿದ. ಕ್ರಿ.ಶ. ಎರಡನೆಯ ಶತಮಾನದ ಉತ್ತರಾರ್ಧದಲ್ಲಿ ಸೆಪ್ಟಿಮಿಯಸ್-ಸೆವೆರಸ್‍ನ ಕಾಲದಲ್ಲಿ ಬಾಲ್‍ಬೆಕ್ ಗ್ರೀಕರ ಒಂದು ಪ್ರಮುಖ ಪಟ್ಟಣವಾಯಿತು. ಕ್ರಿ.ಶ. ಎರಡನೆಯ ಶತಮಾನದಲ್ಲಿ ಆಂಟೋನಿನಸ್ ಪಯಸ್‍ನ ಕಾಲದಲ್ಲಿ ಇಲ್ಲಿಯ ಸ್ಮಾರಕಗಳ ನಿರ್ಮಾಣಕಾರ್ಯ ಪ್ರಾರಂಭವಾಯಿತೆನ್ನಬಹುದು. ಮೊದಲಬಾರಿಗೆ ಜೂಪಿಟರ್ ಹೇಲಿಯೋಪಾಲಿಟಾನಸ್‍ಗಾಗಿ ಇಲ್ಲಿ ಒಂದು ಆಲಯವನ್ನು ಕಟ್ಟಲಾಯಿತು. ಅನಂತರ ಕಟ್ಟಲಾದ ದೇವಾಲಯಗಳೆಂದರೆ ಚಾಕಸ್ ಮತ್ತು ವೀನಸ್‍ನ ದೇವಾಲಯಗಳು. ಆರನೆಯ ಶತಮಾನದಲ್ಲಿ ಹೀಲಿಯೋಪಾಲಿಟಾನಸ್ ದೇವಾಲಯದ ಮಹಾ ಅಂಗಳದಲ್ಲಿ ಕ್ರೈಸ್ತ ದೇವಾಲಯವೊಂದನ್ನು ಕಟ್ಟಲಾಯಿತು. ಮುಂದೆ ಈ ಪಟ್ಟಣ ಅರಬ್ಬರವಶವಾದ ಬಳಿಕ (635) ದೇವಾಲಯದ ಪ್ರದೇಶವನ್ನು ಕೋಟೆಯಾಗಿ ಪರಿವರ್ತಿಸಿದರು. ಎರಡನೆಯ ಮಾರವಾನ್‍ನ ಕಾಲದಲ್ಲಿ (747-48) ಬಾಲ್ ಬೆಕ್ ನಗರದ ವೈಭವ ಸಂಪೂರ್ಣವಾಗಿ ನಾಶವಾಯಿತಲ್ಲದೆ ಕ್ರಿ. ಶ. 12ನೆಯ ಶತಮಾನದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಇಲ್ಲಿಯ ಸ್ಮಾರಕಗಳಿಗೆ ಮತ್ತಷ್ಟು ಹಾನಿ ಉಂಟಾಯಿತು. 1260ರಲ್ಲಿ ಮಂಗೋಲರ ದಾಳಿಯಿಂದ ಇಲ್ಲಿಯ ಕಟ್ಟಡಗಳು ಸಾಕಷ್ಟು ಹಾಳಾದುವು. ಗ್ರೀಕೊ-ರೋಮನ್ ಕಾಲದ ಅವಶೇಷಗಳಿಂದ ಆವೃತವಾಗಿದ್ದ ಬಾಲ್‍ಬೆಕ್ ನಗರವನ್ನು ಮೇಮ್‍ಲುಕ್ ಸುಲ್ತಾನರು ಶ್ರಮವಹಿಸಿ ಪುನರ್‍ನಿರ್ಮಾಣಮಾಡಿದರು. ಇಸ್ಲಾಮ್ ಶೈಲಿಯ ಮಸೀದಿ ಮತ್ತು ಕೋಟೆಗಳು ಈ ಸ್ಥಳದಲ್ಲಿ ತಲೆ ಎತ್ತಿದುವು. 1400ರಲ್ಲಿ ಈ ನಗರ ತೈಮೂರನ ಧಾಳಿಗೆ ತುತ್ತಾದರೂ 15ನೆಯ ಶತಮಾನದ ಅರಬ್ ಲೇಖರನೊಬ್ಬ ಬಾಲ್‍ಬೆಕ್ ನಗರವನ್ನು "ಸಾಲೋಮನ್ ಕಾಲದ ಕಂಬಗಳನ್ನು ಹೊಂದಿರುವ ಭದ್ರವಾದ ಕೋಟೆಯಿಂದ ಆವೃತವಾಗಿರುವ ಮಸೀದಿಗಳು, ಶಾಲೆಗಳು, ವಿಶಾಲವಾದ ರಸ್ತೆಗಳು, ಸ್ನಾನದ ಮನೆಗಳು, ತೋಟಗಳು ಮುಂತಾದ ಸುಂದರ ತಾಣಗಳು ಇರುವ ಭವ್ಯ ನಗರ" ವೆಂದು ವರ್ಣಿಸಿದ್ದಾನೆ

ಜಗತ್ಪ್ರಸಿದ್ಧವಾದ ಬಾಲ್‍ಬೆಕ್‍ನ ಅವಶೇಷಗಳು ಆ ನಗರದ ವಿಸ್ತಾರವಾದ ಪ್ರದೇಶದಲ್ಲಿ ಹರಡಿವೆ. 1898ರಿಂದೀಚೆಗೆ ಇಲ್ಲಿ ಪುರಾತತ್ವ ಸಂಶೋಧನೆಗಳು ಪ್ರಾರಂಭವಾದುವು. ಇಲ್ಲಿಯ ಗ್ರೀಕೋ-ರೋಮನರ ಸ್ಮಾರಕಗಳಲ್ಲಿ ಮುಖ್ಯವಾದವು ಕೋಟೆಯ ಭಾಗ, ಮಹಾದ್ವಾರ ಮುನ್ನಂಗಳ, ಮಹಾಅಂಗಳ, ಕ್ರೈಸ್ತ ದೇವಾಲಯ, ಜೂಪಿಟರ್ ಮತ್ತು ಬಾಕಸ್ ದೇವಾಲಯಗಳು ಇತ್ಯಾದಿ. ಕೋಟೆಯ ಭಾಗ ಈಗಿನ ಪಟ್ಟಣದ ಪಶ್ಚಿಮಕ್ಕಿದೆ. ಇದರ ಒಳಭಾಗದಲ್ಲಿ ಎರಡು ಪಾಳು ದೇವಾಲಯಗಳಿವೆ. ಬೃಹತ್ತಾದ ಕಮಾನುಗಳ ಆಧಾರವಿರುವ, ಎತ್ತರವಾದ ಜಗತಿಯ ಮೇಲೆ ಇವನ್ನು ಕಟ್ಟಲಾಗಿದೆ. ವಾಯವ್ಯ ದಿಕ್ಕಿನಲ್ಲಿರುವ ಕೋಟೆಗೋಡೆಯ ಸ್ವಲ್ಪಭಾಗವನ್ನು ಬೃಹದಾಕಾರದ ಕಲ್ಲುಗಳಿಂದ ಕಟ್ಟಲಾಗಿದೆ. ಕೋಟೆಯ ಒಳಗಿರುವ ದೇವಾಲಯಗಳಿಗೆ ಪೂರ್ವದಿಕ್ಕಿನಿಂದ ವಿಸ್ತಾರವಾದ ದಾರಿಯಿತ್ತು. ಅರಬ್ಬರ ಕಾಲದಲ್ಲಿ ಕೋಟೆಯ ಕಂದಕ ತೋಡಲು ಅದನ್ನು ನಾಶಪಡಿಸಿದರು. ಈ ದೇವಾಲಯಗಳ ಮೊಗಸಾಲೆಯ ಮುಂಭಾಗದಲ್ಲಿ 12 ಕಂಬಗಳಿದ್ದು ಅವುಗಳ ತಳಭಾಗಗಳು ಮಾತ್ರ ಈಗ ಉಳಿದಿದೆ. ಇವುಗಳಲ್ಲಿ ಮೂರು ಕಂಬಗಳ ತಳಭಾಗದಲ್ಲಿ ಆಂಟೋನಿಯಸ್ ಪಯಸ್, ಜೂಲಿಯಾ ಮತ್ತು ಕ್ಯಾರಕೆಲ ಇವರ ಶಾಸನಗಳಿವೆ.

ಮಹಾದ್ವಾರ ದಾಟಿದ ಅನಂತರ ಸಿಗುವುದು ಪಡ್ಭುಜಾಕೃತಿಯ ಮುನ್ನಂಗಳ. ಮೊಗಸಾಲೆಯಿಂದ ವಿಶೇಷಾಲಂಕೃತವಾದ ಮೂರ ದ್ವಾರಕಗಳ ಮೂಲಕ ಇದಕ್ಕೆ ಪ್ರವೇಶ. ಇದರ ಉತ್ತರ ಮತ್ತು ದಕ್ಷಿಣದ ಭಾಗಗಳಲ್ಲಿ ದೀರ್ಘ ಚತುರಸ್ರಾಕಾರದ ಹಿಂಬಣಿಗಳಿದ್ದು ಪ್ರತಿಯೊಂದರ ಮುಂಭಾಗದಲ್ಲಿ ಕೆಂಪು ಗ್ರಾನೈಟ್ ಶಿಲೆಯ ನಾಲ್ಕು ಕಂಬದ ಒಂದು ಸಾಲಿದೆ. ಉತ್ತರದ ಭಾಗದಲ್ಲಿ ಅಂಗಳಕ್ಕೆ ಚಾಚಿರುವಂತೆ ಕಟ್ಟಿರುವ ಒಂದು ವಿಸ್ತಾರವಾದ ತೊಟ್ಟಿ ಬಹಳ ಮುಖ್ಯವಾದದ್ದು. ಇದರ ಗೋಡೆಯ ಹೊರಭಾಗದಲ್ಲಿ ಹಾರ ಸಿಕ್ಕಿಸಿರುವ ಗೂಳಿಯ ತಲೆಬರುಡೆಗಳು, ವೆಡ್ಯೂಸಾಳ ತಲೆಗಳು, ಡ್ಯ್ರಾಗನ್ನಿನ ಮೇಲೆ ಕುಳಿತಿರುವ ಟೈಟನರ್ ಮತ್ತು ಕಾಮದೇವತೆ ಇತ್ಯಾದಿಗಳ ಸುಂದರ ಚಿತ್ರಣ ಅದ್ಭುತವಾಗಿದೆ. ಮುನ್ನಂಗಳದಿಂದ ಮಹಾ ಅಂಗಳಕ್ಕೆ ಹೋಗಲು ಮೂರು ಪ್ರವೇಶಗಳಿರುವ ಭವ್ಯವಾದ ಮಹಾದ್ವಾರವೊಂದಿದೆ. ಯಜ್ಞವೇದಿಕೆ ಇದ್ದ ಈ ಅಂಗಳ ಬಹಳಷ್ಟು ನಾಶವಾಗಿ ಹೋಗಿದ್ದರೂ ಇದರ ಈಶಾನ್ಯ ಭಾಗವನ್ನು ಈಗ ಪುನಾರಚಿಸಿದ್ದಾರೆ. ಸುತ್ತಲೂ ಕಂಬದ ಸಾಲಿನ ವರಾಂಡವನ್ನು ಹೊಂದಿದ್ದು ವಿಸ್ತಾರವಾದ, ಅಂಗಳದಲ್ಲಿ ಈಗ ಇರುವುದು ಕೇವಲ ಭಗ್ನವಾದ ಕಟ್ಟಡಭಾಗಗಳು. ಇಲ್ಲಿಯ ವಾಸ್ತುಶಿಲ್ಪದ ಸುಂದರ ಭಾಗವೆಂದರೆ ತೊಲೆಯ ಮೇಲ್ಭಾಗದ ಪ್ರಸ್ತರ ಮತ್ತು ಕಪೋತ ಅಥವಾ ಕಾರ್ನೀಸುಗಳೆಂದು ಹೇಳಬಹುದು. ಇಲ್ಲಿಯ ಅಲಂಕರಣದಲ್ಲಿ ಹಣ್ಣು, ಎಲೆ, ಬಳ್ಳಿ ಇತ್ಯಾದಿಗಳ ಚಿತ್ರಣಗಳೇ ಹೆಚ್ಚು.

ಮಹಾ ಅಂಗಳದ ಮಧ್ಯಭಾಗದಲ್ಲಿ ಇದ್ದ ಎರಡು ಯಜ್ಞವೇದಿಕೆಗಳಲ್ಲಿ ಒಂದು ಬಹಳಷ್ಟು ಭಗ್ನವಾಗಿದೆ. ಚೌಕಾಕಾರದ, ಎತ್ತರವಾದ ಈ ವೇದಿಕೆಗಳಿಗೆ, ಎತ್ತರವಾದ ಜಗತಿ ಇದ್ದು ಗೋಡೆಯ ನಾಲ್ಕೂ ಮುಖಗಳಲ್ಲಿ ಒಂದೊಂದು ಕೋಷ್ಠವಿದೆ. ನಾಜೂಕಾಗಿ ಕತ್ತರಿಸಿದಂಥ ಕಲ್ಲುಗಳಿಂದ ಮಾಡಿದ ಈ ವೇದಿಕೆಗಳ ಮೇಲೆ ನಿಂತ ಪುರೋಹಿತನಿಗೂ ಆತನ ಸಹಚರರಿಗೂ ಸೂರ್ಯದೇವಾಲಯದ ಒಳಗಡೆ ಇದ್ದ ಹೀಲಿಯೋ ಪಾಲಿಟಾನಸ್‍ನ ವಿಗ್ರಹ ಕಾಣುವಂತೆ ಈ ಯಜ್ಞವೇದಿಕೆಗಳನ್ನು ರಚಿಸಲಾಗಿತ್ತು. ಈ ಮಹಾ ಅಂಗಳದಲ್ಲೇ ಸುಮಾರು 4ನೆಯ ಅಥವಾ 6ನೆಯ ಶತಮಾನದಲ್ಲಿ ಕ್ರೈಸ್ತ ದೇವಾಲಯವೊಂದನ್ನು ಕಟ್ಟಲಾಯಿತು. ಇಲ್ಲಿಯ ಉತ್ಖನನಗಳಲ್ಲಿ ಅಂಗಳದ ಉತ್ತರ ಭಾಗದಲ್ಲಿ ವಿಧಿವಿಹಿತ ಸ್ನಾನಕ್ಕಾಗಿ ಬಳಸುವ ಒಂದು ಉದ್ದವಾದ ಕಲ್ಲಿನ ತೊಟ್ಟಿ ದೊರಕಿದೆ. ಈ ಕ್ರೈಸ್ತ ದೇವಾಲಯದ ಕಟ್ಟಡ ಒಂದು ಸಣ್ಣ ಒಳದಾರಿಯ ಮೂಲಕ ಕೋಟೆಯ ನೈಋತ್ಯ ದಿಕ್ಕಿನಲ್ಲಿರುವ ಮಸೀದಿಯೊಂದಿಗೆ ಸಂಪರ್ಕ ಹೊಂದಿದ್ದಿತು.

ಇಡೀ ಕಟ್ಟಡದ ಸಂಕೀರ್ಣಕ್ಕೆ ಕಳಶಪ್ರಾಯವಾಗಿದ್ದ ಜೂಪಿಟರ್ ಹೀಲಿಯೋ ಪಾಲಿಟಾನಸ್ ದೇವಾಲಯ ಈಗ ಬಹಳಷ್ಟು ಭಗ್ನವಾಗಿದೆ. ಪ್ರಾಂಗಣದ ಪಶ್ಚಿಮ ದಿಕ್ಕಿನಲ್ಲಿ ಪೂರ್ವಕ್ಕೆ ಮುಖಮಾಡಿ ಕಟ್ಟಲಾಗಿರುವ ಈ ಬೃಹತ್ ದೇವಾಲಯಕ್ಕೆ ಮುಂದೆ ವಿಶಾಲವಾದ ಸೋಪಾನವಿದ್ದು, ಮೇಲೆ ಹೇಳಿದ ಕ್ರೈಸ್ತ ದೇವಾಲಯದ ಹಿಂಭಾಗವನ್ನು ಕಟ್ಟಲು ಅದರ ಸ್ವಲ್ಪಭಾಗ ಕೆಡವಲಾಗಿತ್ತು. ಈ ದೇವಾಲಯದ ಅಧಿದೇವತೆ ಜೂಪಿಟರ್ ಹದಾದ್ ಅಥವಾ ಸೂರ್ಯ. ಇಲ್ಲಿರುವ ಬೃಹತ್ ಕಂಬಗಳ ಸೌಂದರ್ಯ, ನಿಲುವು ಬಹು ಆಕರ್ಷಣೀಯವಾದುದು.

ಸಂಪೂರ್ಣ ಭಗ್ನವಾಗಿರುವ ಈ ದೇವಾಲಯದ ಕೆಲವು ಭಾಗಗಳನ್ನು ಈಗಲೂ ಸಹ ಚೆನ್ನಾಗಿ ಗುರುತಿಸಬಹುದಾಗಿದೆ. ಅವುಗಳಲ್ಲಿ ಮುಖ್ಯವಾದುದು ಕಪೋತದ ಒಂದು ಭಾಗ. ಸುಂದರವಾದ ಮತ್ತು ನವಿರಾದ ಅಲಂಕಾರಿಕ ಜ್ಯಾಮೀತೀಯ ಕೆತ್ತನೆಗಳು ಈ ಭಾಗದಲ್ಲಿ ಎಲೆ, ಬಳ್ಳಿ ಇತ್ಯಾದಿಗಳ ಚಿತ್ರಣವೂ ಸೇರಿದೆ. ಇವೆಲ್ಲಕ್ಕಿಂತಲೂ ಗಮನಾರ್ಹವಾದುದೆಂದರೆ ಇಲ್ಲಿರುವ ಸಿಂಹ ಮುಖ್ಯ. ಆಶ್ಚರ್ಯವಾಗುವಷ್ಟರ ಮಟ್ಟಿಗೆ ಆಶೋಕ ಸ್ತಂಭದ ಸಿಂಹ ಮುಖಗಳೊಡನೆ ಹೋಲುವ ಇವು ಈ ಎರಡೂ ಕಲೆಗಳ ನಡುವೆ ಇದ್ದ ಸಂಬಂಧದ ಕುರುಹಾಗಿವೆ. ದೇವಾಲಯದ ಒಳಗಡೆ ಜೂಪಿಟರ್ ಹೀಲಿಯೋ ಪಾಲಿಟಾನಸ್‍ನ ಚಿನ್ನದ ಪ್ರತಿಮೆ ಇತ್ತು. ದೇವತೆ ಬಲಗೈಯಲ್ಲಿ ಸಿಡಿಲಿನ ಚಾವಟಿಯನ್ನೂ ಎಡಗೈನಲ್ಲಿ ಮಿಂಚು ಮತ್ತು ಧಾನ್ಯದ ತೆನೆಯನ್ನೂ ಹಿಡಿದು ರಥಾರೂಢನಾಗಿದ್ದಂತೆ ತೋರಿಬರುತ್ತದೆ. ವಿಗ್ರಹ ಬ್ಯಾಬಿಲೋನಿಯನ್ನರ ಕಲ್ಪನೆಯಾದ ಹದಾದ್ ದೇವತೆಯ ಸ್ವರೂಪವನ್ನು ಹೋಲುತ್ತದೆ. ಪ್ರತಿಮಾ ನಿರ್ಮಾಣದ ರೀತ್ಯ ಬಹಳ ಮಹತ್ತ್ವವುಳ್ಳ ಈ ಶಿಲ್ಪದಲ್ಲಿ ಲೆಬನಾನಿನ ತೀಕ್ಷ್ಣ ಬಿಸಿಲು ಮಳೆಯಿಂದ ಕೂಡಿದ ವಾಯುಗುಣಕ್ಕೆ ಅನುಗುಣವಾದ ಚಿಹ್ನೆ ಇವೆ. ಬಾಲ್‍ಬೆಕ್‍ನಲ್ಲಿ ದೊರೆತಿರುವ (ಕ್ರಿ.ಪೂ. 150) ಹದಾದ್‍ನ ಕಂಚಿನ ಪ್ರತಿಮೆ ಚೌಕಾಕಾರದ ಪೀಠದ ಮೇಲೆ ನಿಂತಿದೆ. ಎರಡು ಕೈಗಳಿರುವ ಈ ವಿಗ್ರಹದ ಬಲಗೈ ಮುರಿದುಹೋಗಿದೆ. ಎತ್ತರವಾದ, ಕೊಡೆಯಾಕಾರದ ಕಿರೀಟ ಎಡ ಮತ್ತು ಬಲಪಾಶ್ರ್ಚಗಳಲ್ಲಿ ದೇವತೆಯ ಗರ್ಭೋತ್ಪಾದನ ಶಕ್ತಿಯ ಪ್ರತೀಕವಾಗಿ ಎರಡು ನಿಂತಿರುವ ಗೂಳಿಗಳನ್ನು ಚಿತ್ರಿಸಲಾಗಿದೆ.

ಜೂಫಿಟರ್ ಹೀಲಿಯೋಪಾಲಿಟಾನಸ್ ದೇವಾಲಯದ ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ ಬೇರೆಯಾದ ಒಂದು ತಳಹದಿಯ ಮೇಲೆ ಮತ್ತು ಸ್ವಲ್ಪ ಕೆಳಮಟ್ಟದಲ್ಲಿ ಕಾರಿಂಥಿಯನ್ ಶೈಲಿಯಲ್ಲಿ ಬಾಕಸ್‍ನ ದೇವಾಲಯವನ್ನು ಕಟ್ಟಲಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ಅಚ್ಚುಕಟ್ಟಾಗಿ ಕಟ್ಟಲಾಗಿರುವ ಈ ದೇವಾಲಯ ಬೇರೆ ಎಲ್ಲ ಕಟ್ಟಡಗಳಿಗಿಂತ ಉತ್ತಮಸ್ಥಿತಿಯಲ್ಲಿ ಉಳಿದಿದೆ.

ಊರಿನ ಮಧ್ಯೆ ಒಂದು ಸಣ್ಣವೃತ್ತಾಕಾರದ ವೀನಸ್ ದೇವಾಲಯವಿದೆ. ಇಂಪೀರಿಯಲ್ ಯುಗದ ಕೊನೆಯ ಕಾಲಕ್ಕೆ ಸೇರಿದ ಈ ಕಟ್ಟಡವನ್ನು ಅನಂತರದ ಕಾಲದಲ್ಲಿ ಸೇಂಟ್ ಬಾರ್ಬರ ಪ್ರಾರ್ಥನಾ ಮಂದಿರವಾಗಿ ಬದಲಾಯಿಸಲಾಯಿತಾದ್ದರಿಂದ ಸ್ವಲ್ಪಮಟ್ಟಿಗೆ ಇದರ ರಕ್ಷಣೆಯಾಯಿತು. ಪಂಚಮುಖದ ಅಧಿಷ್ಠಾನದ ಮೇಲೆ ಕಟ್ಟಲಾಗಿರುವ ವೃತ್ತಾಕಾರದ ಈ ದೇವಾಲಯ ಚಿಕ್ಕದಾದರೂ ಸುಂದರವಾಗಿದೆ. ಅಧಿಷ್ಠಾನದ ಐದು ಮುಖಗಳೂ ಅರ್ಧ ಚಂದ್ರಾಕಾರವಾಗಿ ಹಿಂದೆ ಸರಿದಿದ್ದು ಮುಂದೆ ಚಾಚಿರುವ ಐದು ಮೂಲೆಗಳು ಒಂದೊಂದು ಕಂಬಕ್ಕೆ ಆಸರೆಯಾಗಿವೆ. ವೃತ್ತಾಕಾರದ ಭಿತ್ತಿಯಲ್ಲಿ ಎರಡೆರಡು ಕಂಬಗಳ ಮಧ್ಯೆ ಸರಿಯಾಗಿ ಬರುವಂತೆ ಕೋಷ್ಠಗಳನ್ನು ರಚಿಸಲಾಗಿದೆ. ಪ್ರತಿಯೊಂದು ಕೋಷ್ಠಕ್ಕೂ ನಿಮ್ನವಾದ ಗೋಡೆ ಇದೆ. ಮೇಲ್ಭಾಗದ ಆಕಾರ ಕಮಾನಿನಂತಿದೆ. ದೇವಾಲಯದ ಮುಂದುಗಡೆ ಭಗ್ನವಾದ ಒಂದು ಮುಖ ಮಂಟಪವಿದೆ. ಇದರ ಮುಂದೆ ಮೂರು ಹಂತಗಳಲ್ಲಿ ಕಟ್ಟಲಾಗಿರುವ ಸೋಪಾನದ ಬಹಳಷ್ಟು ಭಾಗವನ್ನು ಚೆನ್ನಾಗಿ ಕಾಪಾಡಿಕೊಂಡು ಬರಲಾಗಿದೆ. ಊರಿನ ಉತ್ತರಭಾಗದಲ್ಲಿ ಮೊದಲು ಸೇಂಟ್ ಜಾನ್ ಪ್ರಾರ್ಥನಾ ಮಂದಿರವಾಗಿದ್ದ ಒಂದು ಮುರಿದುಬಿದ್ದ ಮಸೀದಿಯೂ ರೋಮನರ ಕಾಲದ ರಂಗಮಂದಿರದ ಮುಂಭಾಗದ ಅವಶೇಷಗಳೂ ದೊರೆತಿವೆ.	(ಎಂ.ಎಸ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ